ಹಿರಣ್ಣಯ್ಯ, ಕೆ
	- 1953. ರಂಗಭೂಮಿಯ ಹಾಸ್ಯಚಕ್ರವರ್ತಿ ಎಂದು ಹೆಸರಾಗಿದ್ದ ನಟ, ನಾಟಕಕಾರ, ನಾಟಕ ಕಂಪನಿಯ ಮಾಲೀಕರು. ಕಾಲು ಶತಮಾನಕ್ಕೂ ಹೆಚ್ಚು ಕಾಲ ದುಡಿದು ಕನ್ನಡ ರಂಗಭೂಮಿಯ ಬೆಳೆವಣಿಗೆಗೆ ಶ್ರಮಿಸಿದವರು. ತುಮಕೂರು ಜಿಲ್ಲೆಯ ನೊಣವಿನಕೆರೆ ಸಮೀಪದ ಕಣತ್ತೂರು ಇವರ ಮೂಲಸ್ಥಳವಾದರೂ ವಾಸಿಸುತ್ತಿದ್ದುದು ಬೆಂಗಳೂರಿನಲ್ಲಿ. ತಂದೆ ಅನಂತರಾಮಯ್ಯನವರಿಗೆ ನಾಟಕದ ಗೀಳು ಬಹಳ. ತಾಯಿ ಲಕ್ಷ್ಮೀದೇವಮ್ಮನವರು ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ದ್ದರು. ಚಿಕ್ಕಂದಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಇವರು ಬೆಳೆದದ್ದು ಬಡತನದಲ್ಲಿ. ಬೆಂಗಳೂರು ಕೋಟೆ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ ಇವರಿಗೆ ಸಂಗೀತ ಮತ್ತು ಅಭಿನಯ ಕಲೆಯಲ್ಲಿ ಆಸಕ್ತಿ ಹುಟ್ಟಿದುದರಿಂದ ಶಾಲಾಶಿಕ್ಷಣವನ್ನು ಮಧ್ಯೆ ಬಿಟ್ಟು ಸಂಗೀತ ಮತ್ತು ಹಾರ್ಮೋನಿಯಮ್ ಅಭ್ಯಾಸದಲ್ಲಿ ತೊಡಗಿದರು. ಈ ಮಧ್ಯೆ ತಂದೆ ತೀರಿಕೊಂಡದ್ದರಿಂದ ಬದುಕುವ ಮಾರ್ಗವನ್ನು ಹುಡುಕಿಕೊಂಡು ಮೈಸೂರಿಗೆ ಹೋದರು. ಅಲ್ಲಿಯ ಸಿನಿಮಾ ಮಂದಿರವೊಂದರಲ್ಲಿ ಸಣ್ಣ ಕೆಲಸ ಹಿಡಿದ ಇವರು ಮುಂದೆ ಅಲ್ಲಿಯೇ ಪೈಂಟರ್‍ರಾಗಿಯೂ ಹಾರ್ಮೋನಿಯಮ್ ಕಲಾವಿದರಾಗಿಯೂ ಸ್ವಲ್ಪಕಾಲ ಕೆಲಸ ಮಾಡಿದರು. ಆಗ್ಗೆ ಮೈಸೂರಿ ನಲ್ಲಿದ್ದ ಗಾನೋಲ್ಲಾಸಿನಿ ನಾಟಕ ಸಭೆಯನ್ನು ಸೇರಿ, ನಾಟಕ ಕಲಿಸುವ ಮಾಸ್ತರರಾದರು. ಅಲ್ಲಿ ಅವರು ಕಲಿಸಿದ ಪ್ರಹ್ಲಾದ ಚರಿತ್ರೆ ನಾಟಕ ಪ್ರದರ್ಶನಗೊಂಡು ಒಳ್ಳೆಯ ಹೆಸರು ಬಂತು; ಇವರ ಪ್ರತಿಭೆಯೂ ಬೆಳಕಿಗೆ ಬಂತು. ಇದೇ ನಾಟಕಸಭೆ ಪ್ರದರ್ಶಿಸಿದ ನಿರುಪಮ ನಾಟಕದಲ್ಲಿ, ಯಾವ ಸಿದ್ಧತೆಯೂ ಇಲ್ಲದೆ ನಾಯಕಿಯ ಪಾತ್ರವನ್ನು ಯಶಸ್ವಿಯಾಗಿ ಅಭಿನಯಿಸಿದ ಇವರು ಪ್ರತಿಭಾವಂತ ನಟರೆಂದು ಹೆಸರಾದರು. ಅನಂತರ ಅದೇ ನಾಟಕಸಭೆ ಪ್ರದರ್ಶಿಸಿದ ಸೀತಾಕಲ್ಯಾಣ ನಾಟಕದಲ್ಲಿ ರಾಮನ ಪಾತ್ರವನ್ನು ಅಭಿನಯಿಸಿ ಕೀರ್ತಿ ಗಳಿಸಿದರು. ಅನಂತರ ಗುಬ್ಬಿ ಚನ್ನಬಸವೇಶ್ವರ ನಾಟಕ ಕಂಪನಿಯನ್ನು ಸೇರಿ, ಮೂರು ವರ್ಷಗಳ ಕಾಲ ಅಲ್ಲಿ ವಿವಿಧ ಪಾತ್ರಗಳನ್ನು ಅಭಿನಯಿಸಿದರು. ಅನಂತರ ಎಂ.ವಿ. ಸುಬ್ಬಯ್ಯ ನಾಯ್ಡು ಅವರ ಶ್ರೀ ಸಂಗೀತ ಸಾಹಿತ್ಯ ಸಾಮ್ರಾಜ್ಯ ನಾಟಕ ಮಂಡಲಿಯನ್ನು ಸೇರಿದರು. ಅಲ್ಲಿ ಇವರೇ ರಚಿಸಿದ ರಾಮಾಯಣ ನಾಟಕದಲ್ಲಿ ಆಂಜನೇಯ ಪಾತ್ರವನ್ನು ಅಭಿನಯಿಸಿ ಖ್ಯಾತರಾದರು. ಆ ನಾಟಕ ಕಂಪನಿಯನ್ನೂ ಬಿಟ್ಟು ಇವರು ಮದರಾಸಿಗೆ ಹೋಗಿ ಅಲ್ಲಿ ಪರಿಚಿತರಾಗಿದ್ದ ತಮಿಳು ರಂಗಭೂಮಿಯ ಪ್ರಸಿದ್ಧ ಹಾಸ್ಯನಟ ಎನ್.ಎಸ್. ಕೃಷ್ಣನ್ ಅವರ ಆಶ್ರಯದಲ್ಲಿದ್ದುಕೊಂಡು, ತಮಿಳು ನಾಟಕಗಳಲ್ಲೂ ಚಿತ್ರಗಳಲ್ಲೂ ಅಭಿನಯಿಸಿ ತಮಿಳುನಾಡಿನಲ್ಲೂ ಹೆಸರುಗೊಂಡರು. ಎರಡನೆಯ ಮಹಾಯುದ್ಧದ ಕಾರಣದಿಂದ ಮದರಾಸನ್ನು ಬಿಟ್ಟು ತಮ್ಮ ಮಾವನ ಮನೆ ಸಖರಾಯಪಟ್ಟಣಕ್ಕೆ ಹಿಂದಿರುಗಿ ಸ್ವಲ್ಪಕಾಲ ತಂಗಿದರು. ಅಲ್ಲಿದ್ದಾಗಲೇ ದೇವದಾಸಿ ನಾಟಕವನ್ನು ಬರೆದು, ಪ್ರದರ್ಶನಕ್ಕೆ ಸಿದ್ಧಪಡಿಸಿದರು. ತಮ್ಮ ಹಲವು ಮಿತ್ರರ ನೆರವಿನಿಂದ ಮೈಸೂರಿನಲ್ಲಿ ಹಿರಣ್ಣಯ್ಯ ಮಿತ್ರಮಂಡಲಿ ಎಂಬ ನಾಟಕ ಕಂಪನಿಯನ್ನು 1941ರಲ್ಲಿ ಆರಂಭಿಸಿದರು. ಈ ನಾಟಕ ಕಂಪನಿ ಪ್ರದರ್ಶಿಸಿದ ಮೊದಲ ನಾಟಕ ಸದಾರಮೆ. ಈ ನಾಟಕದಲ್ಲಿ ಇವರು ಆದಿಮೂರ್ತಿ ಮತ್ತು ಕಳ್ಳನ ಪಾತ್ರವನ್ನು ಅಭಿನಯಿಸಿದರು. ಈ ನಾಟಕಕ್ಕೆ ಒಳ್ಳೆಯ ಪ್ರೋತ್ಸಾಹ ದೊರೆತು ಅನೇಕ ಪ್ರದರ್ಶನಗಳು ನಡೆದವು. ಮೈಸೂರಿನಲ್ಲಿ ಮಾತ್ರವಲ್ಲದೆ ಕರ್ನಾಟಕದ ನಾನಾಭಾಗಗಳಲ್ಲೂ ಈ ಮಂಡಲಿ ಪ್ರದರ್ಶಿಸಿದ ದೇವದಾಸಿ, ಎಚ್ಚಮನಾಯಕ, ಜಗಜ್ಜ್ಯೋತಿ ಬಸವೇಶ್ವರ, ಮಕಮಲ್ ಟೋಪಿ ನಾಟಕಗಳು ಬಹು ಜನಪ್ರಿಯವಾದವು. ಇವರು ದೇವದಾಸಿ ನಾಟಕದಲ್ಲಿ ಅಭಿನಯಿಸಿದ ನಾಜೂಕಯ್ಯನ ಪಾತ್ರವಂತೂ ಮನೆಮಾತಾಯಿತು.

	ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ ಇವರು ಎಚ್.ಆರ್.ಜಿ.ಎಸ್. ಪಿಕ್ಚರ್ಸ್ ಎಂಬ ಲಾಂಛನದಡಿ ವಾಣಿ ಎಂಬ ಚಿತ್ರವನ್ನು ನಿರ್ಮಿಸಿದರು.

	ಇವರು ಮಡಿಕೇರಿಯಲ್ಲಿ ನಾಟಕಗಳನ್ನು ಪ್ರದರ್ಶಿಸಲು ಮೊಕ್ಕಾಂಹೂಡಿದ್ದಾಗ 1953 ಮಾರ್ಚ್ 21 ರಂದು ನಿಧನರಾದರು. ರಂಗಭೂಮಿ ಸೇವೆಯನ್ನು ಒಂದು ವ್ರತ ಎಂದು ಭಾವಿಸಿದ್ದ ಇವರು ತಮ್ಮ ಸಹಕಲಾವಿದರನ್ನು ಗೌರವಾದರಗಳಿಂದ ಕಾಣುತ್ತಿದ್ದರು. ಸುಪ್ರಸಿದ್ಧ ರಂಗಭೂಮಿಯ ನಟ ಮಾಸ್ಟರ್ ಹಿರಣ್ಣಯ್ಯನವರು ಇವರ ಮಗ.  

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
			
	*